ಜಠರದ ರೋಗಗಳು   

ಜಠರದ ಉರಿಊತ (ಗ್ಯಾಸ್ಟ್ರೈಟಿಸ್), ಜಠರ ಮತ್ತು ಮುಂಗರುಳಿನ (ಡುಯೋಡೀನಮ್) ವ್ರಣಗಳು-ಈ ರೋಗಗಳನ್ನು ಇಲ್ಲಿ ಚರ್ಚಿಸಿದೆ.

ಜಠರದ ಉರಿಊತ : ಜಠರದ ಲೋಳೆಪೊರೆಯ ಪ್ರಕೋಪದಿಂದಾದ ರೋಗಸ್ಥಿತಿ ಇದು. ಉರಿಊತದ ತೀವ್ರತೆಯ ಕಾಲಾವಧಿಗಳನ್ನು ಅವಲಂಬಿಸಿ ಇದನ್ನು ಕೂರಾದ (ಅಕ್ಯೂಟ್) ಮತ್ತು ದೀರ್ಘಕಾಲಿಕ ಉರಿಊತವೆಂದು ವಿಂಗಡಿಸಿದೆ. ಕೂರಾದ ಉರಿಊತ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ರೋಗಸ್ಥಿತಿ. ಅಪಕ್ವ ಆಹಾರ, ಅತಿಯಾದ ಮದ್ಯಪಾನ, ಕೀಲುನೋವಿಗೆ ಬಳಸುವ ಸ್ಯಾಲಿಸಿಲೇಟ್ ಮತ್ತು ಇತರ ಕೆಲವು ಔಷಧಿಗಳು, ಪದೇ ಪದೇ ತಂಬಾಕು ಜಗಿಯುವುದು, ಆಕಸ್ಮಿಕವಾಗಿ ಆತ್ಮಹತ್ಯೆಯ ಪ್ರಯತ್ನವಾಗಿ ಆಮ್ಲಕ್ಷಾರಗಳ ಸೇವನೆ, ಹೆಚ್ಚು ಖಾರದಿಂದ ಖಾದ್ಯಸೇವೆನೆ, ಬಲು ಬಿಸಿಯಾದ ಆಹಾರಪಾನೀಯಗಳನ್ನು ಸೇವಿಸುವುದು-ಇವೇ ಮುಂತಾದವುಗಳ ಪ್ರಭಾವ ಜಠರದ ಲೋಳೆ ಪೊರೆಯ ಮೇಲೆ ಆಘಾತವಾಗಿ ಪರಿಣಮಿಸಿ, ಜಠರದ ಉರಿತ ಏಕಾಏಕಿ ಪ್ರಕಟವಾಗಬಹುದು. ನ್ಯೂಮೋನಿಯಾ, ಇನ್‍ಫ್ಲೂಎನ್‍ಜಾ, ದಡಾರ, ವಿಷಮಶೀತಜ್ವರ ಮುಂತಾದ ರೋಗಗಳು, ತೀವ್ರತೆರನಾಗಿ ಮೂತ್ರದ ಪ್ರಮಾಣ ಇಳಿಯುವಿಕೆಯಿಂದಾದ ಯುರೀಮಿಯಾ, ಮಾನಸಿಕ ಒತ್ತಡ ಇವು ಆಂತರಿಕ ಕಾರಣಗಳಾಗಿ ಜಠರದ ತೀವ್ರ ಉರಿಊತವನ್ನು ಉಂಟುಮಾಡಬಹುದು. ಸಾಲ್ಮೊನೆಲ್ಲ, ಸ್ಟೆಫೈüಲೊಕಾಕೈ ವಿಷಾಣುಗಳು ಆಹಾರದಲ್ಲಿ ಸೇರ್ಪಡೆಯಾಗಿದ್ದಾಗ ಆ ವಿಷಾಹಾರ ಸೇವನೆಯಿಂದ ಅನೇಕರು ಏಕಕಾಲದಲ್ಲಿ ಜಠರದ ತೀವ್ರ ಉರಿಊತದ ಲಕ್ಷಣಗಳನ್ನು ಪ್ರಕಟಪಡಿಸುವರು.

ಮೇಲುಹೊಟ್ಟೆಯಲ್ಲಿ ತೀವ್ರವಾದ ಹೊಟ್ಟೆನೋವು, ಆರೋಚಿಕ, ಅಗ್ನಿಮಾಂದ್ಯ, ಓಕರಿಕೆ, ವಮನ, ಹೊಟ್ಟೆ ಉಬ್ಬರ ಇವು ಸಾಮಾನ್ಯ ರೋಗಲಕ್ಷಣಗಳು, ಬಾಯಾರಿಕೆ ಭೇದಿಗಳೂ ಕಂಡುಬರಬಹುದು. ವಮನವಾದಾಗ ಪ್ರಾರಂಭದಲ್ಲಿ ಮೊದಲು ಸೇವಿಸಿದ ಆಹಾರ ಲೋಳೆ ಮತ್ತು ಜೊಲ್ಲಿನ ಸಮೇತ ಹೊರಬರುತ್ತದೆ. ಕೆಲವು ಸಲ ಪಿತ್ತರಸಸೇರ್ಪಡೆಯಿಂದ ಹಳದಿ ಇಲ್ಲವೆ ಹಸಿರು ಬಣ್ಣದ ವಮನವಾಗಬಹುದು. ಅನಂತರ ಆಗುವ ವಮನ ನೀರು ನೀರಾಗಿರುತ್ತದೆ. ರೋಗಿ ಬಿಳಿಚಿಕೊಂಡು ಬಲು ನಿತ್ರಾಣನಾಗುತ್ತಾನೆ. ತಲೆನೋವು, ಮಂಪರು, ಸಾಧಾರಣ ಜ್ವರ, ತೀವ್ರ ನಾಡಿಬಡಿತ ಇವೂ ಕಂಡುಬರಬಹುದು. ಕೆಲವು ಗಂಟೆಗಳು ಇಲ್ಲವೆ ದಿನಗಳಾದ ಬಳಿಕ ರೋಗ ತಾನಾಗಿಯೇ ಇಲ್ಲವೇ ಔಷಧೋಪಚಾರದಿಂದ ಗುಣವಾದಾಗ ಎಲ್ಲ ತೀವ್ರ ಲಕ್ಷಣಗಳೂ ಇದ್ದಕ್ಕಿದ್ದಂತೆ ಅದೃಶ್ಯವಾಗುತ್ತವೆ. ರೋಗಸ್ಥಿತಿಯಲ್ಲಿ ಜಠರದ ಲೋಳೆಪೊರೆ ತನ್ನ ಸ್ವಾಭಾವಿಕ ನುಣುಪು ಹೊಳಪನ್ನೂ ಮಾಸಲು ಕೆಂಪು ಬಣ್ಣವನ್ನೂ ಕಳೆದುಕೊಂಡು ರೇಗಿ ಕೆಂಪಾಗಿ ಉಬ್ಬಿಕೊಂಡಿರುವುದು. ಅಲ್ಲಲ್ಲಿ ಲೋಳೆಪೊರೆ ಅಂಟಿಕೊಂಡು ರಕ್ತ ಒಸರಿಕೆಯೂ ಕಂಡುಬರುತ್ತದೆ. ಕೆಲವು ಕಡೆ ಲೋಳೆಪೊರೆ ನಶಿಸಿ ಗಾಯಗೊಂಡ ಸ್ಥಳ ಕೀವುಮಿಶ್ರಿತ ಲೋಳೆಯಿಂದ ಮುಚ್ಚಿರುವುದುಂಟು, ಕೀವನ್ನು ಉತ್ಪತ್ತಿಮಾಡುವ ರೋಗಾಣುಗಳೇ ನೇರವಾಗಿ ರಕ್ತದುಗ್ಧರಸಗಳಿಂದ ಜಠರದ ಲೋಳೆಪೊರೆಯೊಳಕ್ಕೆ ಹರಡಿ ಕೀವಿನಿಂದ ಮುಚ್ಚಿದ ಉರಿಊತವನ್ನು ಉಂಟುಮಾಡಬಹುದು. ಉರಿಊತ ಲೋಳೆಪೊರೆಯ ಮೇಲು ಪದರಿಗೆ ಮಾತ್ರ ಸೀಮಿತವಾಗಿದ್ದಾಗ ಅದು ಸಂಪೂರ್ಣವಾಗಿ ಗುಣ ಹೊಂದುವುದು. ಇನ್ನೂ ಆಳವಾಗಿದ್ದರೆ ಗುಣಹೊಂದಿದಾಗ ಆ ಸ್ಥಳ ನಾರೆಳೆಯಿಂದ ಮುಚ್ಚಲ್ಪಡುತ್ತದೆ.
ರೋಗಿಗೆ ವಿಶ್ರಾಂತಿ ಅಗತ್ಯ. ಉರಿಊತ ವಿಷಾಹಾರವಸ್ತುಗಳ ಸೇವನೆಯಿಂದ ಉಂಟಾಗಿದ್ದು ಇನ್ನೂ ವಮನವಾಗದಿದ್ದರೆ ಸೋಡಾ ಬೈಕಾರ್ಬ್ ಬೆರೆಸಿದ ನೀರನ್ನು ಕುಡಿಸಿ ವಾಂತಿ ಮಾಡಿಸಬೇಕು, ಇಲ್ಲವೆ ಸಂದರ್ಭವನ್ನು ಅರಿತು ನಳಿಕೆ, ಪಿಚಕಾರಿಗಳನ್ನು ಉಪಯೋಗಿಸಿ ನೀರಿನಿಂದ ಹೊಟ್ಟೆಯನ್ನು ತೊಳೆಯಬೇಕು. ಸೂಕ್ತ ವಿಷಾಹಾರಿಯನ್ನು ಕೊಡಬೇಕು. ತಾತ್ಕಾಲಿಕವಾಗಿ ಇನ್ನೇನನ್ನೂ ಸೇವಿಸಬಾರದು. ಆಗಲೇ ಬಲು ಹೆಚ್ಚಾಗಿ ವಾಂತಿ ಆಗಿದ್ದರೆ ದೇಹದಲ್ಲಿ ನೀರು ಮತ್ತು ಲವಣಗಳ ಅಂಶಗಳ ಸಮತೋಲನೆಯನ್ನು ಕಾಯ್ದುಕೊಳ್ಳಬೇಕು. ಇದಕ್ಕೆ ಅವಶ್ಯವಾದ ಲವಣ ಮತ್ತು ಗ್ಲೂಕೋಸುಗಳನ್ನು ಸೂಕ್ತಪ್ರಮಾಣದಲ್ಲಿ ಬೆರೆಸಿದ ನೀರನ್ನು ರಕ್ತನಾಳಗಳ ಮೂಲಕ ಕೊಡಬೇಕು. ವಾಂತಿ ಕಡಿಮೆ ಆದಂತೆ ಬರಿಯ ಇಲ್ಲವೆ ಗ್ಲೂಕೋಸ್ ಸೇರಿಸಿದ ನೀರನ್ನು ಕುಡಿಸಬೇಕು. ಅನಂತರ ಹಸಿವು ತೋರಿದಂತೆ ಕೆಲವು ದಿವಸಗಳತನಕ ಹಾಲು, ಗಂಜಿ ಮೊಟ್ಟೆಗಳಂಥ ಗೊಡ್ಡು ಆಹಾರಗಳನ್ನು ಕೊಡಬೇಕು. ಮದ್ಯಪಾನ, ಕೆಫೀನ್ ಇರುವ ಪಾನೀಯಗಳ ಸೇವನೆ, ಸ್ಯಾಲಿಸಿಲೇಟುಗಳು ಮತ್ತು ಅದೇ ಜಾತಿಯ ಔಷಧಿಗಳು ಈ ಕಾಲದಲ್ಲಿ ನಿಷಿದ್ಧ. ಶಾಮಕ ಔಷಧಿಗಳು ಮತ್ತು ಸೆಡೆತವನ್ನು ನಿವಾರಿಸುವ ಔಷಧಿಗಳನ್ನು ಕ್ರಮವರಿತು ಉಪಯೋಗಿಸಬೇಕಾಗುತ್ತದೆ. ಸಾಮಾನ್ಯವಾಗಿ ರೋಗ ಒಂದೆರಡು ದಿನಗಳಲ್ಲೆ ಗುಣವಾಗುತ್ತದೆ.

ದೀರ್ಘಕಾಲಿಕ ಜಠರದ ಉರಿಊತ : ಇದು ನಿಧಾನವಾಗಿ ಕ್ರಮೇಣ ಉಂಟಾಗುವ ರೋಗಸ್ಥಿತಿ. ಜಠರದ ದೀರ್ಘಕಾಲಿಕ ಉರಿಊತದಿಂದ ನರಳುವವರ ಸಂಖ್ಯೆ ಜನಸಾಮಾನ್ಯರಲ್ಲಿ ಸುಮಾರು 15-60 ಮಂದಿಗಳಷ್ಟಿರಬಹುದು ಎಂದು ಅಂದಾಜು. ಮಧ್ಯವಯಸ್ಕರು ಮತ್ತು ಮಧ್ಯವಯಸ್ಸನ್ನು ದಾಟಿದವರು ಈ ರೋಗದಿಂದ ಪೀಡಿತರಾಗುತ್ತಾರೆ. ದೀರ್ಘಾವಧಿ ಉರಿಊತಕ್ಕೆ ಕಾರಣ ಸರಿಯಾಗಿ ತಿಳಿಯದು. ಕೂರಾದ ಜಠರದ ಉರಿಊತಕ್ಕೆ ಕಾರಣವಾದ ಅಂಶಗಳೇ ಪದೇ ಪದೇ ಪ್ರಭಾವ ಬೀರಿ ರೋಗವನ್ನು ದೀರ್ಘಾವಧಿಯದನ್ನಾಗಿ ಮಾರ್ಪಡಿಸಬಹುದು. ಹೀಗಾಗಿ ಬಹುಬಿಸಿಯಾದ ಇಲ್ಲವೆ ಅತಿ ತಣ್ಣಗಿರುವ ಆಹಾರದ ಸೇವನೆ, ತಂಬಾಕು, ಮದ್ಯಸಾರಗಳು, ಸೋಂಕು, ಭಾವೋದ್ರೇಕ, ಕೆಲವು ಔಷಧಗಳು ಒಗ್ಗದಿರುವಿಕೆ ಮುಂತಾದವೆಲ್ಲವೂ ದೀರ್ಘಕಾಲಿಕ ಉರಿಊತಕ್ಕೆ ಕಾರಣವಾಗಬಹುದು. ಪೈಲೋರಸ್ ಮತ್ತು ಮುಂಗರುಳ ಸಂಧಿಸ್ಥಾನದಲ್ಲಿ ಜಠರವ್ರಣವಾದರೆ ಆಹಾರಸಾಗುವ ಮಾರ್ಗ ಕಿರಿದಾಗಿ, ಆಹಾರ ಜಠರದಲ್ಲಿ ನಿಂತು ಕೊಳೆತು, ಅದರಿಂದ ಜಠರದ ಉರಿಊತ ಉಂಟಾಗಬಹುದು.

ದೀರ್ಘಕಾಲದ ಉರಿಊತದಲ್ಲಿ ನಾಲ್ಕು ಬಗೆಯನ್ನು ಗುರುತಿಸಬಹುದು. ಏಕಕಾಲಿಕವಾಗಿ ಒಂದಕ್ಕಿಂತ ಹೆಚ್ಚುಬಗೆಯ ಉರಿಊತಗಳು ಕಂಡುಬರಬಹುದು. ಮೊದಲ ಬಗೆಯ ಮೇಲ್ಪದರದ ಉರಿಊತದಲ್ಲಿ ಲೋಳೆಪೊರೆ ರೇಗಿ ಕೆಂಪಾಗಿದ್ದು ಅಲ್ಲಲ್ಲಿ ಲೋಳೆ ಅಂಟಿಕೊಂಡಿರುವುದು ಕಾಣಿಸುತ್ತದೆ. ಎರಡನೆಯದು ಲೋಳೆಪೊರೆ ಕ್ಷೀಣಸಿ ಉರಿಊತಗೊಂಡಿರುವುದು. ಈ ಸ್ಥಿತಿಯಲ್ಲಿ ಲೋಳೆಪೊರೆಯ ಗ್ರಂಥಿಗಳು ನಿರ್ನಾಮವಾಗಿರುವುವು. ಪೊರೆ ತೆಳ್ಳಗಾಗಿ ಅಡಿಯಲ್ಲಿರುವ ರಕ್ತನಾಳಗಳೆಲ್ಲ ಮೇಲೆದ್ದು ಕಾಣುತ್ತವೆ. ಅವು ಅಲ್ಲಲ್ಲಿ ಹರಿದು ಬೂದು ಹಸಿರುಮಿಶ್ರಬಣ್ಣದ ಸಣ್ಣ ಗಾಯಗಳಿದ್ದಂತೆ ತೋರುವುದು. ಕ್ಷೀಣಿಸಿದ ಲೋಳೆಪೊರೆ ವಾಸಿಯಾಗಿ ತನ್ನ ಮೊದಲಿನ ಸ್ಥಿತಿಯನ್ನು ಎಂದೂ ಪಡೆಯಲಾರದು. ಮೂರನೆಯ ಬಗೆ ಲೋಳೆಪೊರೆ ವೃದ್ಧಿಸಿ ಉರಿಊತಗೊಂಡಿರುವುದು. ಇಲ್ಲಿ ಜಠರದ ಭಿತ್ತಿ ದಪ್ಪವಾಗಿ ಪದರಗಳು ಉಬ್ಬಿ ಸ್ಪಂಜಿನಂತಿರುತ್ತವೆ. ನಾಲ್ಕನೆಯ ಬಗೆ ಜಠರದ ಮೇಲೆ ಶಸ್ತ್ರಕ್ರಿಯೆಮಾಡಿದ ಬಳಿಕ ಕಂಡುಬರುವ ಉರಿಊತ. ಇದರಲ್ಲಿ ಮೇಲೆ ಹೇಳಿದ ಮೂರು ರೀತಿಯ ಉರಿಊತಗಳ ಲಕ್ಷಣಗಳೂ ಕಂಡು ಬರುತ್ತವೆ.

ದೀರ್ಘಕಾಲಿಕ ಉರಿಊತದ ಲಕ್ಷಣಗಳು ಅನಿರ್ದಿಷ್ಟ. ಮೇಲುಹೊಟ್ಟೆಯ ಭಾಗದಲ್ಲಿ ನೋವು, ಹೊಟ್ಟೆ ಉಬ್ಬರ, ಗುಡುಗುಡು ಶಬ್ದ, ಹಸಿವಿಲ್ಲದಿರುವಿಕೆ, ತೇಗು, ಕಾಲಪ್ರವೃತ್ತಿ ಬದಲಾವಣೆ, ಅವ್ಯಕ್ತಹಿಂಸೆ ಇತ್ಯಾದಿಗಳು ಸಾಮಾನ್ಯ. ಓಕರಿಕೆ, ವಾಂತಿ ಹೊಟ್ಟೆತೊಳಸುಗಳೂ ಇರಬಹುದು. ಮದ್ಯಪಾನದಿಂದ ಪದೇ ಪದೇ ಉರಿಊತ ಉಂಟಾಗಿದ್ದರೆ ಅಂಥ ವ್ಯಕ್ತಿ ಬೆಳಿಗ್ಗೆ ಎದ್ದಾಗಲೇ ಓಕರಿಸುತ್ತ ಆಹಾರವನ್ನು ಸೇವಿಸಲಾಗದವನಾಗಿರುವನು. ಆದರೆ ಸಂಜೆ ರಾತ್ರಿಗಳಲ್ಲಿ ಆತ ಆಹಾರವನ್ನು ತೆಗೆದುಕೊಳ್ಳಬಲ್ಲ. ಕೆಲವು ವೇಳೆ ಜಠರವ್ರಣದ ಲಕ್ಷಣಗಳೂ ವ್ಯಕ್ತವಾಗಬಹುದು. ಅಪರೂಪವಾಗಿ ಜಠರದಲ್ಲಿ ರಕ್ತಸ್ರಾವವೂ ಆಗಬಹುದು. ದೀರ್ಘಕಾಲಿಕ ಉರಿಊತದ ನಿದಾನವನ್ನು ಎಕ್ಸ್‍ಕಿರಣ ಪರೀಕ್ಷೆಯಿಂದ ಮಾಡಲು ಸಾಧ್ಯವಿಲ್ಲ. ಕೆಲವು ಬಾರಿ ಜಠರದರ್ಶಕ (ಗ್ಯಾಸ್ಟ್ರಾಸ್ಕೋಪ್) ಪರೀಕ್ಷೆಯಿಂದ ಮತ್ತು ಅದರ ಮೂಲಕ ಕತ್ತರಿಸಿ ತೆಗೆದ ಲೋಳೆಪೊರೆಯ ಭಾಗವನ್ನು (ಜೀವುಂಡಿಗೆ ವಿಧಾನ) ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸುವುದರಿಂದ ರೋಗವನ್ನು ಪತ್ತೆಹಚ್ಚಬಹುದು. ಇದರ ಚಿಕಿತ್ಸೆ ಸಹಜವಾಗಿಯೇ ಉರಿಊತಕ್ಕೆ ಕಾರಣವಾದ ಅಂಶವನ್ನು ನಿರ್ಮೂಲಮಾಡುವುದಾಗಿದೆ. ರೋಗಿಗೆ ಯಾವ ಕೆಟ್ಟ ರೋಗವೂ ಅಂಟಿಲ್ಲವೆಂದು ಧೈರ್ಯ ಹೇಳುವುದು, ಆಹಾರ ಪಥ್ಯ, ಮದ್ಯಪಾನ ತಂಬಾಕು ಕೆಫೀನ್ ಪಾನೀಯಗಳ ತ್ಯಾಗ ಇವು ಆವಶ್ಯಕ. ಜಠರದ ವ್ರಣದಲ್ಲಿ ಅನುಸರಿಸುವಂತೆ ಪದೇ ಪದೇ ಹಾಲುಸೇವನೆ ಸಪ್ಪೆ ಆಹಾರಸೇವನೆ ಅಗತ್ಯವಾಗಬಹುದು. ಆಹಾರಾಂಶಗಳ ಕೊರತೆ ಇದ್ದರೆ, ಅದನ್ನು ಸರಿಪಡಿಸುವುದು, ಮನಃಶಾಂತಿಗೋಸ್ಕರ ಶಾಮಕ ಔಷಧಿಗಳನ್ನು ವೈದ್ಯರ ಸಲಹೆಯಂತೆ ಸೇವಿಸುವುದು, ಇವೂ ಚಿಕಿತ್ಸೆಯ ಮೂಲಾಧಾರ ಎನ್ನಬಹುದು. ಆಹಾರವನ್ನು ಚೆನ್ನಾಗಿ ಅಗಿದು ತಿನ್ನಲು ಹಲ್ಲುಗಳಿಲ್ಲದಿದ್ದರೆ ಕೃತಕ ಹಲ್ಲನ್ನು ಕಟ್ಟಿಸಿಕೊಳ್ಳಬೇಕು. ಉರಿಊತಗಳನ್ನು ಉಂಟು ಮಾಡುವ ಔಷಧಿಗಳನ್ನು ಸೇವಿಸಬಾರದೆನ್ನುವುದು ವ್ಯಕ್ತವೇ ಆಗಿದೆ. ಬೆಳಗ್ಗೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ಸೋಡಾ ಬೈಕಾರ್ಬ್ ಬೆರೆಸಿ ಬರಿ ಹೊಟ್ಟೆಯಲ್ಲಿ ಕುಡಿದರೆ ಅದು ಜಠರದಲ್ಲಿನ ಲೋಳೆಯನ್ನು ಹೋಗಲಾಡಿಸುವುದು. ಜಠರದಲ್ಲಿ ಆಮ್ಲದ ಪ್ರಮಾಣ ಕಡಿಮೆ ಇದ್ದರೆ ತೆಳುಮಾಡಿದ ಹೈಡ್ರೊಕ್ಲೋರಿಕ್ ಆಮ್ಲವನ್ನು ಇನ್ನಷ್ಟು ನೀರಿನಲ್ಲಿ ಬೆರೆಸಿ ಕುಡಿಯಬೇಕು. ಅಪರೂಪ ಸಂದರ್ಭಗಳಲ್ಲಿ ರಕ್ತಸ್ರಾವವಾದರೆ ಅದನ್ನು ನಿಲ್ಲಿಸಲು ಶಸ್ತ್ರಕ್ರಿಯೆ ಅನಿವಾರ್ಯವಾಗಬಹುದು. ರೋಗಿ ಸಾಮಾನ್ಯವಾಗಿ ಪೂರ್ಣ ಗುಣ ಹೊಂದುತ್ತಾನೆ. (ಆರ್.ಎಸ್.ವಿ,; ಪಿ.ಎಸ್.ಎಸ್.)
ಜಠರ ಮತ್ತು ಮುಂಗರುಳಿನ ವ್ರಣಗಳು : ಜಠರ ಮತ್ತು ಮುಂಗರುಳಿನ ಲೋಳೆ ಪೊರೆಯಲ್ಲಿ ಉಂಟಾಗುವ ಹುಣ್ಣು ವ್ರಣಗಳಿವು. ಇವು ತಾತ್‍ಕ್ಷಣಿಕವಾಗಿ ಉಂಟಾಗಬಹುದು. ಇಲ್ಲವೇ ಬಹುಕಾಲಿಕವಾಗಿ ಕಂಡುಬರಬಹುದು.

ತಾತ್‍ಕ್ಷಣಿಕ ವ್ರಣಗಳು : ಒರಟಾದ, ಸಿದ್ಧಪಡಿಸದ ಮತ್ತು ಚುರುಗುಟ್ಟಿಸುವ ಆಹಾರವನ್ನು ಅಗಿಯದೆ ಆತುರವಾಗಿ ತಿಂದಾಗ, ಅಥವಾ ಆತ್ಮಹತ್ಯೆಯಲ್ಲಿನಂತೆ ತೀಕ್ಷ್ಣವಾದ ಕ್ಷಾರ ಅಥವಾ ಆಮ್ಲಪಾನೀಯಗಳನ್ನು ಕುಡಿದಾಗ ಜಠರ ಮತ್ತು ಮುಂಗರುಳಿನ ಒಳಪೊರೆಗೆ ಅಸಾಮಾನ್ಯ ಆಘಾತ ಉಂಟಾಗಿ ಅಲ್ಲಲ್ಲಿ ಹುಣ್ಣಾಗುತ್ತದೆ. ವಿಷಮಶೀತಜ್ವರ, ನ್ಯೂಮೋನಿಯ ಮುಂತಾದ ವಿಷಾಣು ಸೋಂಕು, ವಿಷಾಹಾರಸೇವನೆ, ಯುರೀಮಿಯ, ತೀವ್ರ ದೈಹಿಕ ಮಾನಸಿಕ ಆಘಾತಗಳು, ಆಸ್ಪಿರಿನ್ ಕಾರ್ಟಿಸಾನುಗಳಂಥ ಕೆಲವು ಔಷಧಗಳ ಸೇವನೆ-ಇವು ಎಲ್ಲವೂ ಲೋಳೆಪೊರೆಯನ್ನು ಅಲ್ಲಲ್ಲಿ ಕೊರೆದು ಸಣ್ಣ ಹುಣ್ಣುಗಳನ್ನು ಉಂಟುಮಾಡುತ್ತವೆ. ಒಟ್ಟಾಗಿ ಹೇಳುವುದಾದರೆ ಜಠರ ಮುಂಗರುಳಿನ ತಾತ್‍ಕ್ಷಣಿಕ ಹುಣ್ಣುಗಳು ಅಪರೂಪ. ವ್ಯಾಪಕವಾಗಿ ಸುಟ್ಟಗಾಯದಿಂದ ವಿಷಪದಾರ್ಥಗಳು ರಕ್ತಗತವಾಗಿ ಪಿತ್ತರಸದಲ್ಲಿ ವಿಸರ್ಜಿತವಾಗಿ ಪಿತ್ತರಸ ಕರುಳಿಗೆ ಹರಿಯುವ ಕಡೆ ಕರುಳಿನಲ್ಲಿ ಹುಣ್ಣನ್ನು ಉಂಟುಮಾಡಬಹುದು. ತಾತ್‍ಕ್ಷಣಿಕ ಹುಣ್ಣುಗಳು ಸಣ್ಣವಾಗಿಯೂ ಅಲ್ಪ ಆಳದವಾಗಿಯೂ ಜಠರ ಮತ್ತು ಮುಂಗರುಳಿನಲ್ಲಿ ಪೂರ್ಣವಾಗಿ ಇಲ್ಲವೆ ವ್ಯಾಪಕವಾದ ಕ್ಷೇತ್ರದಲ್ಲಿ ಕಂಡುಬರುತ್ತವೆ. ಇವು ಸಾಧಾರಣವಾದ ಅಗ್ನಿ ಮಾಂದ್ಯವನ್ನು ಉಂಟುಮಾಡುವುವು. ಅನೇಕ ವೇಳೆ ಇವು ಗಮನಕ್ಕೆ ಬಾರದೇ ಹೋಗುವುದುಂಟು. ಕೆಲವು ಸಂದರ್ಭಗಳಲ್ಲಿ ಇವುಗಳಿಂದ ಸ್ವಲ್ಪವಾಗಿಯೋ ಬಹುವಾಗಿಯೋ ರಕ್ತಸ್ರಾವವಾಗಬಹುದು. ಅಪೂರ್ವವಾಗಿ ಹುಣ್ಣುಗಳು ಭಿತ್ತಿಯಲ್ಲಿ ರಂಧ್ರವನ್ನುಂಟುಮಾಡುವುದು. ಬಾಯಿ ಮತ್ತು ಅನ್ನನಾಳದ ಮೂಲಕ ಜಠರದೊಳಕ್ಕೆ ಹೊಗಿಸುವ ಜಠರದರ್ಶಕ ಎಂಬ ಸಲಕರಣೆಯಿಂದ ಪರೀಕ್ಷಿಸಿ ತಾತ್‍ಕ್ಷಣಿಕ ವ್ರಣಗಳನ್ನು ಪತ್ತೆಮಾಡಬಹುದು. ವಿಶ್ರಾಂತಿ ಮತ್ತು ಕಾರಣಕರ್ತೃವಿನ ನಿರ್ಮೂಲನವೇ ಚಿಕಿತ್ಸೆ. ಒಂದು ವಾರ ಹಾಲುಗಂಜಿಯಂಥ ಇಲ್ಲವೆ ಅಂಗಡಿಯಲ್ಲಿ ಮಾರಾಟಕ್ಕಿರುವ ಸಿದ್ಧ ಆಹಾರದಂಥ ಸುಲಭವಾಗಿ ಜೀರ್ಣಿಸಬಹುದಾದ ದ್ರವರೂಪದ ಆಹಾರ ಪಥ್ಯ ಜೊತೆಗೆ ಜಠರದಲ್ಲಿ ಆಮ್ಲವನ್ನು ನಿಸ್ಸತ್ತ್ವ ಗೊಳಿಸುವ ಔಷಧಿಗಳು (ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್, ಮೆಗ್ನೀಸಿಯಮ್ ಸಿಲಿಕೇಟುಗಳಂಥ ಪ್ರತ್ಯಾಮ್ಲಗಳು) ಸಾಮಾನ್ಯವಾಗಿ ಸಾಕಾಗುತ್ತವೆ. ಇವು ತಾತ್ಕಾಲಿಕ ವ್ರಣಗಳಾದ್ದರಿಂದ ಬೇಗ ಗುಣವಾಗುತ್ತವೆ. ಅಗಾಧ ರಕ್ತಸ್ರಾವ ರಂಧ್ರೀಕರಣದಂಥ ಅಪರೂಪ ಸಂದರ್ಭಗಳಲ್ಲಿ ರಕ್ತಪೂರೈಕೆಯೂ ತತ್‍ಕ್ಷಣದ ಶಸ್ತ್ರಚಿಕಿತ್ಸೆಯೂ ಆವಶ್ಯಕವಾಗುತ್ತವೆ.

ಬಹುಕಾಲಿಕ ವ್ರಣ : ಜಠರ ಸ್ರವಿಸುವ ರಸವು ಪೆಪ್ಸಿನ್ ಎಂಬ ಕಿಣ್ವವನ್ನೂ ಹೈಡ್ರೊಕ್ಲೋರಿಕ್ ಆಮ್ಲವನ್ನೂ ಒಳಗೊಂಡಿರುವ ಪ್ರಬಲ ಜೀರ್ಣಕಾರಿ. ಜಠರದ ಒಳಪೊರೆಯ ಸ್ವಾಭಾವಿಕ ಸತ್ತ್ವ, ಲೋಳೆ ಮತ್ತು ಇತರ ಅವ್ಯಕ್ತ ಕಾರಣಗಳು ಅದನ್ನು ಈ ಜೀರ್ಣಕಾರಿಗಳಿಂದ ರಕ್ಷಿಸುತ್ತವೆ. ಆದರೆ ದೈಹಿಕ ಮಾನಸಿಕ ಕಾರಣಗಳಿಂದ ಲೋಳೆಪೊರೆಗೆ ಆಘಾತವಾಗಿ ಅದು ಸ್ಥಳೀಯವಾಗಿ ನಿಸ್ಸತ್ತ್ವಗೊಂಡರೆ ಇಲ್ಲವೆ ಲೋಳೆಯಿಂದ ತಕ್ಕಷ್ಟು ರಕ್ಷಣೆ ಒದಗದಿದ್ದರೆ ಕ್ರಮೇಣ ಅಂಗದ ಭಿತ್ತಿ ಭಾಗಶಃ ಜೀರ್ಣಗೊಂಡು ದೀರ್ಘಕಾಲಿಕ ವ್ರಣ ತಲೆದೋರುವುದು. ಮುಂಗರುಳಿನಲ್ಲಿ ಜಠರಕ್ಕಿಂತ ಮೂರುಪಟ್ಟು ಹೆಚ್ಚು ವ್ರಣವಾಗುತ್ತದೆ. ಮುಂಗರುಳಿನಲ್ಲಿ ಅಲ್ಲದೆ ಪೆಪ್ಸಿನ್ ಕಾರ್ಯವೆಸಗುವ ಸ್ಥಳದಲ್ಲಿ ಎಲ್ಲಿಯಾದರೂ ವ್ರಣ ಉಂಟಾಗಬಹುದಾದ್ದರಿಂದ ಈ ವ್ರಣಕ್ಕೆ ಪೆಪ್ಟಿಕ್ ವ್ರಣವೆಂದು 1882ರಲ್ಲಿ ಕ್ವಿನ್ಕೆ ಎಂಬ ವಿಜ್ಞಾನಿ ಹೆಸರಿಟ್ಟ. ಎಲ್ಲ ನಾಗರಿಕ ಸಮಾಜಗಳಲ್ಲೂ ಈ ರೋಗದಿಂದ ನರಳುವವರಿದ್ದಾರೆ. ದಕ್ಷಿಣ ಆಫ್ರಿಕದ ಬಂಟು ಜನಾಂಗದಲ್ಲಿ ಈ ರೋಗವಿಲ್ಲವೆಂದು ವರದಿಯಾಗಿದೆ. ಆದರೆ ರೋಗ ಕರಿಯರಲ್ಲಿ ಇಲ್ಲವೆಂದು ಹೇಳಲಾಗುವುದಿಲ್ಲ. ಏಕೆಂದರೆ ನೈಜೀರಿಯ ಪ್ರದೇಶದ ನೀಗ್ರೋಗಳಲ್ಲಿ ಈ ರೋಗ ಇತರರಲ್ಲಿ ಕಂಡುಬರುವಂತೆಯೇ ಕಾಣಿಸಿಕೊಳ್ಳುವುದು ತಿಳಿದಿದೆ. ಇದರಿಂದ ಸಾಯುವವರು ವಿರಳ. ಈ ವ್ರಣ 20 ವರ್ಷ ವಯಸ್ಸಿಗಿಂತ ಕೆಳಗಿರುವವರಲ್ಲಿ ಅಪರೂಪ. ನರಳುವವರ ಸಂಖ್ಯೆ ವಯಸ್ಸಾದಂತೆ ಏರಿ 50 ತುಂಬಿದ ವಯಸ್ಕರಲ್ಲಿ ಪರಮಾವಧಿಯನ್ನು ಮುಟ್ಟುತ್ತದೆ. ಅನಂತರ ರೋಗ ಇಳಿಮುಖವಾಗಿ 65 ಮೀರಿದ ಮೇಲೆ ಅಷ್ಟಾಗಿ ಕಂಡುಬರುವುದಿಲ್ಲ. ನೂರಕ್ಕೆ 10 ಜನ ಒಂದಲ್ಲ ಒಂದು ಕಾಲದಲ್ಲಿ ಈ ರೋಗದಿಂದ ನರಳುತ್ತಾರೆಂದು ಅಂದಾಜು ಮಾಡಲಾಗಿದೆ. ಜಠರದ ಹುಣ್ಣು ಗಂಡಸರು ಹೆಂಗಸರಲ್ಲಿ ಸಮವಾಗಿದ್ದರೂ ಕರುಳಿನ ಹುಣ್ಣು ಗಂಡಸರಲ್ಲಿ ಹೆಂಗಸರಿಗಿಂತ ಮೂರರಷ್ಟು ಅಧಿಕ. ಹೆಂಗಸರಲ್ಲಿ ಮುಟ್ಟುನಿಲ್ಲುವ 5 ವರ್ಷಗಳ ಅವಧಿಯಲ್ಲಿ ಅಂದರೆ ಸುಮಾರು 45-50 ವರ್ಷ ವಯಸ್ಕರಲ್ಲಿ ಇದ್ದಕ್ಕಿದ್ದಂತೆ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರೋಗದಿಂದ ನರಳುವ ಸ್ತ್ರೀಯರಲ್ಲಿ ಮೂರರಲ್ಲಿ ಒಂದು ಭಾಗ ಈ ವಯಸ್ಸಿನವರು. ಮಕ್ಕಳನ್ನು ಹಡೆಯುವ ಹೆಂಗಸರಿಗೆ ಗರ್ಭಕಾಲದಲ್ಲೂ ಹಾಲೂಡಿಸುವ ಕಾಲದಲ್ಲೂ ಈ ರೋಗದಿಂದ ಮುಕ್ತಿ ಉಂಟೆಂದು ಹೇಳಲಾಗಿದೆ. ಉದ್ಯೋಗಕ್ಕೂ ಪೆಪ್ಟಿಕ್ ವ್ರಣಕ್ಕೂ ಸಂಬಂಧವಿದೆ ಎಂಬ ನಂಬಿಕೆ ಇದ್ದರೂ ಇದಕ್ಕೆ ಆಧಾರ ಸಾಲದು. ಪೆಪ್ಟಿಕ್ ವ್ರಣಗಳಿಗೆ ಕಾರಣಗಳು ನಿರ್ದಿಷ್ಟವಾಗಿ ಗೊತ್ತಿಲ್ಲ. ಪ್ರಾರಂಭದಿಂದಲೂ ಹೈಡ್ರೊಕ್ಲೋರಿಕ್ ಆಮ್ಲರಹಿತವಾದ ಜಠರರಸವನ್ನು ಉತ್ಪಾದಿಸುವವರಲ್ಲಿ ಪೆಪ್ಟಿಕ್ ಹುಣ್ಣು ಇದುವರೆಗೂ ವರದಿಯಾಗಿಲ್ಲ. ಜಠರದ ಲೋಳೆಪೊರೆಯ ಮೇಲೆ ಆಮ್ಲ ಪ್ರಭಾವಿಸಿ ಅದನ್ನು ಜೀರ್ಣಿಸುವುದರಿಂದಲೇ ಹುಣ್ಣು ಉಂಟಾಗುತ್ತದೆಂದು ಸಾಮಾನ್ಯವಾಗಿ ವಿವರಿಸುವುದಾದರೂ ಆಮ್ಲಾಂಶ ಅಧಿಕವಾಗಿರುವವರಲ್ಲಿ ಅನೇಕರಿಗೆ ಹುಣ್ಣು ಇರುವುದಿಲ್ಲ. ಕರುಳಿನ ವ್ರಣ ಇರುವವರಲ್ಲಿ ಆಮ್ಲಾಧಿಕ್ಯ ಸಾಮಾನ್ಯವಾಗಿದ್ದರೂ ಜಠರವ್ರಣ ಇರುವವರಲ್ಲಿ ಆಮ್ಲದ ಅಂಶ ಸಾಮಾನ್ಯ ಮಟ್ಟದಲ್ಲಿ ಅಥವಾ ಅದಕ್ಕಿಂತ ಕಡಿಮೆಯಾಗಿಯೇ ಇರುತ್ತದೆ. ದೀರ್ಘಕಾಲಿಕ ದೈಹಿಕ ಮಾನಸಿಕ ಒತ್ತಡ ಪರಿಸ್ಥಿತಿಗಳಲ್ಲಿ ಅಡ್ರಿನಲ್ ಗ್ರಂಥಿಯ ಸ್ರಾವ ಅಧಿಕವಾಗಿ ಅದರ ಪ್ರಚೋದನೆಯಿಂದ ಹಾಗೂ ನರಗಳ ಪ್ರಚೋದನೆಯಿಂದ ಹೀಗೆ ಆಮ್ಲ ಮತ್ತು ಪೆಪ್ಸಿನ್ ಎರಡೂ ಅಧಿಕವಾಗಿ ಉತ್ಪತ್ತಿಯಾಗುವುದು ಕಂಡುಬಂದಿದೆ. ಆದರೆ ಇಂಥ ಎಲ್ಲರಲ್ಲೂ ಪೆಪ್ಟಿಕ್ ವ್ರಣ ಉಂಟಾಗುವುದಿಲ್ಲ. ಅಧಿಕ ಆಮ್ಲಾಂಶವಿದ್ದರೂ ಜಠರದ ಲೋಳೆಪೊರೆಗೆ ಆತಂಕವಾಗದಂತೆ ಸ್ವಾಭಾವಿಕರಕ್ಷಣೆ ಇರುವುದು ವ್ಯಕ್ತವಾಗಿದೆ. ಲೋಳೆಪೊರೆಯಿಂದ ಒಸರುವ ಲೋಳೆ ಅದಕ್ಕೆ ರಕ್ಷಣೆ ನೀಡುತ್ತೆಂದು ನಂಬಲಾಗಿದೆ. ಆದರೆ ರೋಗದಿಂದ ನರಳುವವರ ಜಠರದಲ್ಲಿ ಅನೇಕವೇಳೆ ಈ ಲೋಳೆಪದಾರ್ಥದ ಕೊರತೆ ಇರುವುದಿಲ್ಲವೆಂಬುದು ತಿಳಿದಿದೆ. ಆದ್ದರಿಂದ ರಕ್ಷಣೆ ಲೋಳೆಯಿಂದ ಮಾತ್ರ ಒದಗುತ್ತದೆ ಎಂದು ಹೇಳುವಂತಿಲ್ಲ.

ಹೆಲಿಕಾಬ್ಯಾಕ್ಟರ್ ಪೈಲೊರಿ ಎಂಬ ಸೂಕ್ಷ್ಮಜೀವಾಣು ಸೋಂಕು ಅಭಿವೃದ್ಧಿ ಶೀಲ ದೇಶಗಳಲ್ಲಿ ವಿಶೇಷ. ಅವುಗಳ ಸಂಖ್ಯೆ ವ್ಯಕ್ತಿಯ ವಯೋಮಾನ ಹೆಚ್ಚಿದಂತೆ ಮೇಲೆÉೀರುತ್ತದೆ. ಈ ಸೋಂಕಿನ ಪ್ರಭಾವಕ್ಕೀಡಾದ ಬಹುತೇಕ ಮಂದಿ ಯಾವುದೇ ಗುಣಲಕ್ಷಣಗಳನ್ನು ಪ್ರಕಟಪಡಿಸದಿದ್ದರೂ, ಕೆಲವರು ಮಾತ್ರ ರೋಗದ ಚಿಹ್ನೆಗಳನ್ನು ಪ್ರಕಟ ಪಡುಸುತ್ತಾರೆ. ಚಲನ ಶಕ್ತಿಯನ್ನು ಪಡೆದಿರುವ ಈ ಸೂಕ್ಷ್ಮಜೀವಾಣು ಲೋಳೆ ಪೂರೆಯೊಳಕ್ಕೆ ಸಾಗಿ ಅಲ್ಲಿ ತನ್ನ ನೆಲೆಯನ್ನು ಕಂಡುಕೊಳುವುದು.

ಈ ಸೂಕ್ಷ್ಮಜೀವಾಣೂ ಯುರಿಯೇಸ್ ಎಂಬ ಕಿಣ್ವವನ್ನು ತಯಾರಿಸುತ್ತಿದ್ದು ಅದು ಜಠರ-ಮುಂಗರುಳಿನ ಅಮ್ಲವನ್ನು ತಟಸ್ಥಗೊಳಿಸುವುದು ಮತ್ತು ಅಮೋನಿಯ ಉತ್ಪಾದಿಸುವುದು. ಈ ಬಾಕ್ಟೀರಿಯ ಸ್ಥಳಿಕ ಉರಿಯೂತ ಪ್ರಕ್ರಿಯೆಯನ್ನು ಉತ್ತೇಜಿಸಿ ನಿಡುಗಾಲ ಜಠರದ ಉರಿತಕ್ಕೆಡೆಮಾಡಿಕೊಡುವುದು. ಅ ಉರಿಯೂತಕ್ಕೆ ಹೆಚ್‍ಪೈಲೋರಿ ಬಿಡುಗಡೆಮಾಡುವ ಅನೇಕ ಬಗೆಯ ಸೈಟೋಕಿನ್‍ಗಳು ಕಾರಣ. ಅದು ಜಠರ ಕೋಶದಲ್ಲಿ ಭದ್ರವಾಗಿ ನೆಲೆಯೂರುತ್ತದೆ. ಅದರ ಪರಿಣಾಮವಾಗಿ ಜಠರದ ಅನ್ನಾಗಸೆಯ (ಪೈಲೋರಸ್) ಕುಳಿ (ಆಂಟ್ರಮ್)ಯಲ್ಲಿ ಉರಿತ, ವಿಪುಲಪ್ರಮಾಣದಲ್ಲಿ  ಗ್ಯಾಸ್ಟ್ರಿನ್ ರಸಸ್ರವೀಕೆ ಮತ್ತು ಅಮ್ಲದ ತಯಾರಿಕೆಯುಂಟಾಗುತ್ತದೆ. ಇಷ್ಟೆಲ್ಲ ಇದ್ದರೂ ಕೆಲವರಲ್ಲಿ ಮಾತ್ರ ಮುಂಗರುಳಿನಲ್ಲಿ ಹುಣ್ಣಿನ ಬೆಳೆವಣಿಗೆಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಜಠರ ಹುಣ್ಣುಗಳ ಬೆಳವಣಿಗೆಯೂ ಹೆಚ್‍ಪೈಲೋರಿ ಪಾತ್ರ ನಿರ್ದಿಷ್ಟವಾಗಿ ತಿಳಿಯದು. ಬಹುಶಃ ಅಲ್ಲಿ ಅದು ಆಮ್ಲ ಮತ್ತು ಪಪ್ಸಿನ್ ಪ್ರಭಾವಕ್ಕೆ ಅಲ್ಲಿನ ಲೋಳ್ಪರೆ ತೋರ್ಪಡಿಸುವ ಪ್ರತಿರೋಧವನ್ನು ಕುಗ್ಗಿಸುವಂತೆ ತೋರುತ್ತದೆ.

	ಜಠರ ಹುಣ್ಣು ಉಂಟಾಗುವ ಸಂಭಾವ್ಯವನ್ನು ಸ್ಟೀರಾಯಿಡ್ ಅಲ್ಲದ ಉರಿಯೂತ ವಿರೋಧ ಔಷಧಿಗಳು ಮತ್ತು ಧೂಮಪಾನ ಹೆಚ್ಚಿಸುತ್ತವೆ. ಹುಣ್ಣು ತಲೆದೊರಲು ಆವi್ಲ ಮತ್ತು ಪೆಪ್ಸಿನ್‍ಗಳ ಪಾಚಕ (ಡೈಜಸ್ಟಿವ್) ಪ್ರಭಾವ ಮತ್ತು ಪ್ರತಿರೋಧ ಅಂಶಗಳ ಮಧ್ಯದಲ್ಲಿನ ಸಮತೋಲನೆಯ ಏರುಪೇರು ಕಾರಣ. ಅಲ್ಲನ ಲೋಳ್ಪರೆ ತೋರ್ಪಡಿಸುವ ಪ್ರತಿರೋಧ ಹುಣ್ಣಿನ ಬೆಳೆವಣಿಗೆ ವಿರುದ್ಧ ರಕ್ಷಣೆಯನ್ನೊದಗಿಸುತ್ತದೆ. ಆಮ್ಲ ಮತ್ತು ಪೆಪ್ಸಿನ್‍ಗಳು ತಮ್ಮ ಪ್ರಭಾವ ಬೀರಿದಾಗ ಪ್ರತಿರೋಧ ಭಗ್ನಗೊಂಡು ಹುಣ್ಣಿನ ಬೆಳೆವಣಿಗೆಗೆ ಅವಕಾಶ ಉಂಟಾಗುತ್ತದೆ. ತುಂಬ ಹೆಚ್ಚು ಪ್ರಮಾಣದಲ್ಲಿ ಆಮ್ಲ ಸ್ರವಿಕೆ ಉಂಟಾಗುವ ಜೋಲಿಂಗರ್-ಎಲಿಸನ್ ಲಕ್ಷಣ ಕೂಟದಲ್ಲಿ ಜಠರ ಹುಣ್ಣುಗಳ ಪದೇ ಪದೇ ಗೋಚರಿಸುತ್ತವೆ. ಮುಂಗರುಳ ಹುಣ್ಣಾಗಳು ಉಂಟಾಗಲು ಗ್ಯಾಸ್ಟಿನ್ ಉತ್ತೇಜಿಸುವ ಆಮ್ಲದ ಹೆಚ್ಚಿನ ಸ್ರವಿಕೆ ಕಾರಣ.

ವ್ಯಕ್ತಿಯ ರಕ್ತವರ್ಗಕ್ಕೂ ಜಠರದ ವ್ರಣಕ್ಕೂ ಸಂಬಂಧವಿದೆ ಎಂಬ ಶಂಕೆ ಉಂಟು ಔ ಗುಂಪಿನ ರಕ್ತವರ್ಗಕ್ಕೆ ಸೇರಿದ ವ್ಯಕ್ತಿಗಳಲ್ಲಿ ಜಠರವ್ರಣವಿಲ್ಲದಿದ್ದರೂ ಮುಂಗರುಳಿನ ವ್ರಣ ಅಧಿಕವಾಗಿರುತ್ತದೆಂದು ತೋರಿಸಲಾಗಿದೆ. ಸಮುದ್ರಮಟ್ಟದಿಂದ 10,000 ಅಡಿ ಮೇಲ್ಮಟ್ಟದ ಪ್ರದೇಶಗಳಲ್ಲಿ ವಾಸಿಸುವ ಜನರು ಈ ರೋಗದಿಂದ ಹೆಚ್ಚು ನರಳುತ್ತಾರೆ. ದೀರ್ಘಾವಧಿ ಶ್ವಾಸಾಂಗರೋಗಗಳಿಂದ ನರಳುವವರಲ್ಲೂ ಪೆಪ್ಟಿಕ್ ವ್ರಣ ಹೇರಳವೆಂಬ ನಂಬಿಕೆ ಉಂಟು. ಹೊಗೆಸೊಪ್ಪು, ಮದ್ಯಸಾರ ಕಾಫಿಪಾನೀಯಗಳ ದುರುಪಯೋಗ ಪೆಪ್ಟಿಕ್ ವ್ರಣಕ್ಕೆ ಸುಗಮವೆಂದು ನಂಬಲಾಗಿದೆ. ಬಹುಕಾಲಿಕ ವ್ರಣ ಸುಮಾರು 1 ಸೆಂ.ಮೀ. ವ್ಯಾಸದ ಆಳವಾದ ದೊಡ್ಡ ಹುಣ್ಣು. ಒಂದೋ ತಪ್ಪಿದರೆ ಎರಡೋ ಹುಣ್ಣು ಇರುತ್ತದೆ. ಜಠರದ ಸಣ್ಣಡೊಂಕಿನ ಕೆಳಭಾಗ ಮತ್ತು ಮುಂಗರುಳಿನ ಮೊದಲಭಾಗ ಹುಣ್ಣನ್ನು ಭರಿಸುವ ನಿರ್ದಿಷ್ಟ ಕ್ಷೇತ್ರ. ಅಪರೂಪಕ್ಕೆ ಅನ್ನನಾಳದ ಅಂತ್ಯಭಾಗದಲ್ಲಿ ಮತ್ತು ಇತರ ಕಡೆ (ಮೆಕ್ಕೆಲನ ಹೊರಕೋಶ ಇತ್ಯಾದಿ) ಇಂಥ ವ್ರಣ ಕಂಡು ಬರಬಹುದು. ಒಂದೊಂದು ವೇಳೆ ಜೋಡಿಹುಣ್ಣುಗಳು, ಒಂದು ಜಠರದಲ್ಲಿ ಇನ್ನೊಂದು ಮುಂಗರುಳಿನಲ್ಲಿ, ಇರುವುದುಂಟು.

ರೋಗದ ಆನುಭವಿಕ ಮತ್ತು ಇತರ ಲಕ್ಷಣಗಳು ಪ್ರತಿ ವ್ಯಕ್ತಿಯಲ್ಲಿ ರೋಗದ ಕಾಲಾವಧಿಯನ್ನು ಅನುಸರಿಸಿ ಪ್ರಕಟವಾಗುತ್ತವೆ. ಅಗ್ನಿಮಾಂದ್ಯ, ಉದರದ ಮೇಲುಭಾಗದಲ್ಲಿ ನೋವು, ನೋವಿಗೂ ಆಹಾರಸೇವನೆಗೂ ವಮನವಾಗುವುದಕ್ಕೂ ಸಂಬಂಧವಿರುವಿಕೆ-ಇವು ರೋಗದ ವಿಶಿಷ್ಟ ಲಕ್ಷಣಗಳೆಂದು ಹೇಳಬಹುದು. ಜಠರದ ಹುಣ್ಣಿನಲ್ಲಿ ಆಹಾರ ತೆಗೆದುಕೊಂಡು ಳಿ-1ಳಿ ಗಂಟೆ ಮೇಲೆ ಮತ್ತು ಮುಂಗರುಳ ಹುಣ್ಣಿನಲ್ಲಿ ಇನ್ನೂ ತಡವಾಗಿ ಅಲ್ಪವಾಗಿಯೊ ತಡೆಯಲಾರದಷ್ಟೊ ನೋವು ಉಂಟಾಗುತ್ತದೆ. ನೋವಿನ ಆಧಿಕ್ಯದಿಂದ ಹೊಟ್ಟೆತೊಳಸು ಉಂಟಾಗಿ ವಯನವಾಗಬಹುದು. ಆ ಬಳಿಕ ನೋವು ಕಡಿಮೆ ಆಗುವುದು ಶೀಘ್ರವಾಗಿ ರೋಗಿಗೆ ಮನದಟ್ಟಾಗುತ್ತದೆ. ಆದ್ದರಿಂದ ನೋವು ಉಂಟಾದ ವೇಳೆಯಲ್ಲಿ ರೋಗಿ ಗಂಟಲಿಗೆ ಬೆರಳುಹಾಕಿಕೊಂಡು ವಮನವಾಗುವುದನ್ನು ಪ್ರಚೋದಿಸುತ್ತಾನೆ. ರೋಗ ಉಲ್ಬಣವಾದಂತೆ ನೋವು ಹೆಚ್ಚಾಗುತ್ತದೆ; ಮತ್ತು ನೋವಿನ ಕಾಲಾವಧಿ ಹೆಚ್ಚುತ್ತ ಕೊನೆಗೆ ನೋವು ನಿರಂತರವಾಗುತ್ತದೆ. ಕರುಳಿನಲ್ಲಿ ವ್ರಣವಿದ್ದರೆ ನೋವು ರಾತ್ರಿ ಅಥವಾ ಬೆಳಗಿನಜಾವ, ಜಠರ ಖಾಲಿ ಇದ್ದಾಗ, ಉಂಟಾಗುತ್ತದೆ (ಹಸಿವಿನ ನೋವು). ಆಹಾರ ತೆಗೆದುಕೊಳ್ಳುವುದರಿಂದ ಅಥವಾ ಒಂದು ಲೋಟ ನೀರಿನಿಂದ ಕೂಡ ಇದು ಶಮನವಾಗುವುದು. ವ್ರಣದಿಂದ ಅಧಿಕ ರಕ್ತಸ್ರಾವವಾಗುವುದು ಒಂದು ಜಟಿಲತೆ. ವಮನದ ಮೂಲಕ ಇಲ್ಲವೆ ಕಪ್ಪು ಮಲದ ರೂಪದಲ್ಲಿ ಈ ರಕ್ತ ವಿಸರ್ಜಿತವಾಗುತ್ತದೆ. ರಕ್ತಪೂರೈಕೆ ಅಗತ್ಯವಾಗುವಷ್ಟು ರಕ್ತನಷ್ಟ ಆಗಬಹುದು. ವ್ರಣ ಆಳವಾಗುತ್ತ ಅಂಗಭಿತ್ತಿ ರಂಧ್ರೀಕರಣವಾಗಬಹುದು. ಇದು ತತ್‍ಕ್ಷಣದ ಶಸ್ತ್ರಚಿಕಿತ್ಸೆ ಅಗತ್ಯವಾದ ಜಟಿಲತೆ. ವ್ರಣ ಅದರ ಸುತ್ತ ಇರುವ ಮೇದೋಜೀರಕಾಂಗ, ಯಕೃತ್ತು ಮತ್ತು ದೊಡ್ಡಕರುಳಿಗೆ ವ್ಯಾಪಿಸಬಹುದು. ವಮನ ಎಡೆಬಿಡದೆ ಇರುವುದು, ಪೈಲೋರಿಕ್ ತುದಿ ಕುಗ್ಗಿ ಅನ್ನಮಾರ್ಗಕ್ಕೆ ಅಡಚಣೆ ಆಗಿ ದೇಹ ಕ್ಷೀಣಿಸುವುದು ಇವು ಇತರ ಜಟಿಲತೆಗಳು. ನೂರಕ್ಕೆ ಸುಮಾರು 8 ವ್ರಣಗಳು ಏಡಿಗಂತಿರೋಗಕ್ಕೆ ರೂಪಾಂತರಗೊಳ್ಳಬಹುದು.

ರೋಗಿಗೆ ಬೇರಿಯಮ್ ಕದಡನ್ನು ಕುಡಿಸಿ ಅನಂತರ ಎಕ್ಸ್‍ಕಿರಣ ಪರೀಕ್ಷೆಯಿಂದ ವೀಕ್ಷಿಸಿ ರೋಗನಿದಾನವನ್ನು ಸ್ಥಿರೀಕರಿಸಲಾಗುತ್ತದೆ. ಜಠರದರ್ಶಕದಿಂದ ರೋಗವನ್ನು ದೃಢಪಡಿಸಬಹುದು. ಮುಂದಿನ ದಾಖಲಾತಿ ಮತ್ತು ತುಲನೆಗೋಸ್ಕರ ಹುಣ್ಣಿನ ಎಕ್ಸ್‍ಕಿರಣ ಚಿತ್ರಗಳನ್ನು ತೆಗೆಯುವುದೂ ವಾಡಿಕೆ. ಜಠರದ ಆಮ್ಲ ಸ್ರವನ ಸಾಮಥ್ರ್ಯದ ಅಂದಾಜು, ಹುಣ್ಣಿನ ಸುಳಿವು ಕೊಡುವ ಭಾಗದಿಂದ ಸ್ವಲ್ಪ ಭಾಗವನ್ನು ಕತ್ತರಿಸಿ ತೆಗೆದು ಹೆಚ್. ಪೈಲೋರಿ ಅಲ್ಲಿ ನೆಲೆಯೂರಿರುವುದನ್ನು ಖಚಿತಪಡಿಸಿಕೊಳ್ಳಬಹುದು. 

ಚಿಕಿತ್ಸೆಯ ಮುಖ್ಯ ಗುಣ ರೋಗಿ ತೋರ್ಪಡಿಸುವ ಗುಣಲಕ್ಷಣಗಳನ್ನು ದೂರಮಾಡುವುದು, ಅಲ್ಪ ಕಾಲದಲ್ಲಿ ಹುಣ್ಣು ಮಾಯಲು ಅವಕಾಶ ಮಾಡಿಕೊಡುವುದು ಮತ್ತು ದೀರ್ಘಾವಧಿ ಕಾಲದಲ್ಲಿ ಹುಣ್ಣು ಸಂಪೂರ್ಣದೂರವಾಗುವಂತೆ ಮಾಡುವುದಾಗಿದೆ. ಪೆಪ್ಟಿಕ್ ಹುಣ್ಣುಗಳಲ್ಲಿ ಹೆಚ್ ಪೈಲೋರಿ ಸೋಂಕನ್ನು ಆಮೂಲಾಗ್ರವಾಗಿ ತೆಗೆದುಹಾಕುವುದಕ್ಕೆ ಮಹತ್ವವಿದೆ. ಅದರಿಂದ ರೋಗ ಮರುಕಳಿಸುವುದನ್ನು ತಪ್ಪಿಸಬಹುದು.

ಈ ಸೋಂಕು ಇದ್ದ ಹುಣ್ಣಿನ ಲಕ್ಷಣ ತೋರಿಸುತ್ತಿರುವವರು ಪ್ರೊಟಾನ್ ಪಂಪ್‍ತಡೆ ಔಷಧಗಳನ್ನು ಅಮೊಕ್ಸಿಸಲಿನ್ ಇಲ್ಲವೆ ಕ್ಲಾರಿತ್ರೊಮೈಸಿನ್ ಮತ್ತು ಮೆಟ್ರನೈಡ್ ಜಾಲ್‍ಗಳನ್ನು ಒಂದು ವಾರ ಸೇವಿಸಬೇಕು.

ನೋವು ಕಡಿಮೆಮಾಡಲು ಅಮ್ಲಾರೋಧಗಳು, ಹಿಸ್ಟಮಿನ್ - 1 ಗ್ರಾಹಕ ವಿರೋಧಗಳು ಪ್ರೋಟಾನ್ ಪಂಪ್ ತಡೆ ಔಷಧಿಗಳು, ಬಿಸ್ಮತ್, ಸುಕ್ರಾಲ್ಫೇಟ್, ಮಿಸೊಪ್ರೊಸ್ಟಾಲ್‍ಗಳನ್ನು ಕೊಡಲಾಗುವುದು. ಉಪ್ಪು, ಹುಳಿ, ಖಾರ, ಸಂಬಾರಗಳಿಲ್ಲದ ಗೊಡ್ಡು ಮತ್ತು ಮೆದುವಾದ ಆಹಾರವನ್ನು ಮಿತವಾಗಿ ಅಡಿಗಡಿಗೆ ತೆಗೆದುಕೊಳ್ಳಬೇಕಾಗುತ್ತದೆ. ಗಂಟೆಗೊಂದು ವೇಳೆ ಹಾಲು, ಹಾಲಿನ ಕೆನೆ, ಅನ್ನ, ಕೋಳಿ ಮೊಟ್ಟೆ, ತರಕಾರಿ ಮುಂತಾದವನ್ನು ಸೂಕ್ತವಾಗಿ ಆಳವಡಿಸಿಕೊಂಡು ದೇಹಕ್ಕೆ ಬೇಕಾಗುವಷ್ಟನ್ನು ಮಾತ್ರ ಸೇವಿಸತಕ್ಕದ್ದು. ಕಾಫಿ, ಚಹ, ಧೂಮ ಮತ್ತು ಮದ್ಯಪಾನ ನಿಷಿದ್ಧ. ಈ ರೀತಿ ವ್ಯವಸ್ಥಿತ ಆಹಾರದಲ್ಲಿ ಜೀವಸತ್ತ್ವ ಅ ಕೊರತೆ ಆಗಿರುವ ಸಂಭವವಿರುವುದರಿಂದ ಈ ಜೀವಸತ್ತ್ವವನ್ನು ಪ್ರತ್ಯೇಕವಾಗಿ ದಿನವಹಿ ತೆಗೆದುಕೊಳ್ಳಬೇಕು. ಆಹಾರಸೇವನೆಯಾದ ಬಳಿಕ ಸ್ರಾವವಾಗುವ ಆಮ್ಲವನ್ನು ಕಡಿಮೆಮಾಡಲೂ ನಿಸ್ಸತ್ತ್ವಗೊಳಿಸಲೂ ನಿಯಮಾನುಸಾರ ಔಷಧಿಗಳನ್ನು ತೆಗೆದುಕೊಳ್ಳಬೇಕು. ಆಲಿವ್ ಎಣ್ಣೆ, ಅಲ್ಯೂಮಿನಿಯಮ್ ಹೈಡ್ರಾಕ್ಸೈಡಿನಂಥ ಪ್ರತ್ಯಾಮ್ಲಗಳು ಮುಖ್ಯ.

15% ಮಂದಿ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯ. ಅಂಗಭಿತ್ತಿ ರಂಧ್ರ ಬಿದ್ದಾಗ, ತಡೆಗಟ್ಟಲಾಗದ ರಕ್ತಸ್ರಾವವಾಗುತ್ತಿದ್ದಾಗ, ತತ್‍ಕ್ಷಣ ಶಸ್ತ್ರಚಿಕಿತ್ಸೆ ಮಾಡಿದರೆ ರೋಗಿ ಬದುಕಬಹುದು. ಔಷಧ ಸೇವನೆಯಿಂದ ಗುಣವಾಗದ ವ್ರಣವನ್ನು ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬೇಕು. ಹೈಡ್ರೊಕ್ಲೋರಿಕ್ ಆಮ್ಲ ಹಾಗೂ ಪೆಪ್ಸಿನ್ ಸ್ರಾವವನ್ನು ಕಡಿಮೆಯಾಡಲು ಜಠರಕ್ಕೆ ಒದಗುವ ನರವನ್ನು (ವೇಗಸ್ ನರಗಳು)ಕತ್ತರಿಸಿ ಹಾಕುವುದು (ವೇಗಾಟಮಿ) ಇಲ್ಲವೆ ಜಠರದ ಭಾಗವನ್ನು ಸೂಕ್ತಪ್ರಮಾಣದಲ್ಲಿ ತೆಗೆದುಹಾಕುವುದು (ಪಾರ್ಶಿಯಲ್ ಗ್ಯಾಸ್ಟ್ರೆಕ್ಟಮಿ ಅಂಡ್ ಆಂಟ್ರೆಕ್ಟಮಿ) ಮತ್ತು ಹಾಗೆ ತೆಗೆದು ಹಾಕಿದ ಬಳಿಕ ಜಠರಕ್ಕೂ ಕರುಳಿಗೂ ಇರುವ ಸಂಪರ್ಕವನ್ನು ಹಿಗ್ಗಿಸುವುದು (ಪೈಲೊರೊಪ್ಲಾಸ್ಟಿ) ಇಲ್ಲವೆ ಜಠರಕ್ಕೂ ಕರುಳಿನ ಇನ್ನೊಂದು ಭಾಗಕ್ಕೂ ನಡುವೆ ಕೃತಕ ಸಂಪರ್ಕವೇರ್ಪಡಿಸುವುದು (ಗ್ಯಾಸ್ಟ್ರೊ ಎಂಟೆರಾಸ್ಟೊಮಿ) ಇವು ಸಾಮಾನ್ಯವಾಗಿ ಅನುಸರಿಸಲಾಗುವ ಶಸ್ತ್ರಕ್ರಮಗಳು. ಹುಣ್ಣು ಏಡಿಗಂತಿಯಾಗಿ ಪರಿವರ್ತನೆ ಆದಂತಿದ್ದರೆ ಜಠರವನ್ನೂ ಅದರ ಸೇರ್ಪಡೆಗಳನ್ನೂ ವ್ಯಾಪಕವಾಗಿ ತೆಗೆದುಹಾಕಬೇಕಾದದ್ದು (ರ್ಯಾಡಿಕಲ್ ಗ್ಯಾಸ್ಟ್ರೆಕ್ಟೊಮಿ) ಆವಶ್ಯಕವಾಗುತ್ತದೆ. ಶಸ್ತ್ರಚಿಕಿತ್ಸೆಯಿಂದ ಬಹುಸಂಖ್ಯಾತ ರೋಗಿಗಳು ಗುಣವಾಗುತ್ತಾರೆ. ಸುಮಾರು 4-6 ರೋಗಿಗಳಲ್ಲಿ ಹುಣ್ಣು ಮರುಕಳಿಸುವುದುಂಟು.

ಬಿಗಿಯಾದ ಮೇಲ್ವಿಚಾರಣೆಯಲ್ಲಿ ಹೆಚ್‍ಪೈಲೋರಿ ಸೋಂಕು ದೂರಮಾಡಿದಲ್ಲಿ ರೋಗ ಗುಣಹೊಂದುತ್ತದೆ. (ಎಲ್.ಎಸ್.ಆರ್.; ಆರ್.ಎಸ್.ವಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ